ಅವನು ನಂಗೆ ಇಷ್ಟವಿಲ್ಲ ಕಣೇ…!!!


ಭಾಗ 1: ಅವನು ನನಗೆ ಬೇಡ

`ಹೇ ಅವನು ನನಗೆ ಇಷ್ಟವಿಲ್ಲ ಕಣೇ’

ಶ್ರಾವ್ಯಳ ಮಾತಿಗೆ ರಂಜಿತ ಬೆಚ್ಚಿಕೇಳಿದಳು.

`ಹೇ ಏನಾಗಿದೆ ನಿನಗೆ. ನಿನ್ನೆ ನಿನ್ನ ಎಂಗೇಜ್‌ಮೆಂಟ್‌ ಆಯ್ತು. ಅವತ್ತೇ ಹೇಳಬೇಕಿತ್ತು.. ನೀನು ಒಪ್ಪಿದರಿಂದ ತಾನೇ ಮದುವೆ ಫಿಕ್ಸ್‌ ಮಾಡಿದ್ದು. ಯಾಕೋ ಅಷ್ಟ ಚಂದದ ಹುಡುಗ ನಿನಗೆ ಬೇಡ್ವ?’

ಅದಕ್ಕೆ ಶ್ರಾವ್ಯ `ಸುಮ್ನಿರೇ, ನಂಗೆ ಬೆಂಗಳೂರು ಹುಡುಗ ಇಷ್ಟವಿಲ್ಲ. ಈ ಊರು ಬಿಟ್ಟು ಅಲ್ಲಿಗೆ ಹೋಗಬೇಕಾ? ಅಪ್ಪ ಅಮ್ಮನ ಒತ್ತಾಯಕ್ಕೆ ಹೂಂ ಅಂದದ್ದು’

`ನಂಗೊತ್ತಿಲ್ಲ ಏನಾದರೂ ಮಾಡ್ಕೊ’ ಅಂತ ರಂಜಿತ ಎದ್ದು ಹೋಗಲು ನೋಡಿದಾಗ ಅವಳ ಕೈ ಹಿಡಿದೆಳೆದ ಶ್ರಾವ್ಯ `ಹೇ, ರಂಜಿ ಏನಾದರೂ ಐಡಿಯಾ ಹೇಳೇ’ ಅಂದಳು.

ಅವಳ ಮಾತಿಗೆ `ಇದಕ್ಕೆ ಏನು ಮಾಡೋದಪ್ಪ’ ಅಂತ ತಲೆಕೆಡಿಸಿಕೊಳ್ಳುತ್ತ ಅಲ್ಲೇ ಕುಳಿತುಕೊಳ್ಳುತ್ತ ಯೋಚಿಸಿದಳು. `ಹೇ ಹೀಗೆ ಮಾಡು. ನಿನ್ನ ಅಮ್ಮನಲ್ಲಿ ಹೇಳು’

`ಬೇಡ ಅದು ಬೇಡ. ಬೇರೆ ಉಪಾಯ ಹೇಳು’ ಅದಕ್ಕೆ ರಂಜಿತ ಮತ್ತೆ ಸ್ವಲ್ಪ ಹೊತ್ತು ಯೋಚಿಸಿದಳು.

`ನೀನು ನಿನ್ನ ಭಾವಿ ಪತಿಗೆ ಫೋನ್‌ ಮಾಡಿ ಹೇಳು. ಹುಡುಗರಿಗೆ ಬೇಗ ಅರ್ಥವಾಗುತ್ತದೆ’ ಅದಕ್ಕೆ ಶ್ರಾವ್ಯ `ನಂಗೆ ಭಯ ಆಗುತ್ತೆ’ ಕೊನೆಗೆ ರಂಜಿತಳ ಒತ್ತಾಯಕ್ಕೆ ಶಶಾಂಕನಿಗೆ ಫೋನ್‌ ಮಾಡಲು ಒಪ್ಪಿದಳು.

ನಿನ್ನ ನಂಬರ್‌ ಅವನಲ್ಲಿ ಇರುತ್ತೆ. ನನ್ನ ಮೊಬೈಲ್‌ನಿಂದ ಮಾಡು ಅಂತ ರಂಜಿತ ತನ್ನ ಮೊಬೈಲ್‌ ಕೊಟ್ಟಳು.`ಹೇ ಅವನು ರಿಸೀವ್‌ ಮಾಡ್ತಾ ಇಲ್ಲ’ ಶ್ರಾವ್ಯ ನಿರಾಸೆಯ ಧ್ವನಿಯಲ್ಲಿ ಹೇಳಿದಳು.`ಹುಂ. ಈಗ 9 ಗಂಟೆ, ಬ್ಯುಸಿ ಇರಬೇಕು. ಆಮೇಲೆ ಟ್ರೈ ಮಾಡು.. ಮೊಬೈಲ್‌ ನಿನ್ನಲ್ಲಿ ಇರಲಿ. ಆಮೇಲೆ ಸಿಗ್ತಿನಿ’ ಅಂತ ಹೇಳಿ ರಂಜಿತ ಹೊರಹೋದಳು.

***
ಮುಂಜಾನೆ 9 ಗಂಟೆಗೆ(ಅವನು ನಿತ್ಯ ಎದ್ದೇಳುವ ಸಮಯ)ಎದ್ದಾಗ ಮೊಬೈಲ್‌ನಲ್ಲಿ ಮಿಸ್‌ಕಾಲ್‌ ಇತ್ತು. ತೆರೆದು ನೋಡಿದರೆ ಯಾವುದೋ ಅಪರಿಚಿತ ನಂಬರ್‌.

ಶಶಾಂಕ್‌ ಆ ನಂಬರ್‌ಗೆ ಫೋನ್‌ ಮಾಡಿದ.

ಹಲೋ ಯಾರು? ಅಂದ.

ಈ ಕಡೆಯಲ್ಲಿದ್ದ ಶ್ರಾವ್ಯಳಿಗೆ ಏನು ಹೇಳಬೇಕು ಗೊತ್ತಾಗಲಿಲ್ಲ. ಮದುವೆ ಇಷ್ಟ ಇಲ್ಲ ಅಂತ ಹೇಳಲು ಧೈರ್ಯನೂ ಬರಲಿಲ್ಲ. ಸುಮ್ಮನೆ ರಾಂಗ್‌ ನಂಬರ್‌ ಅಂತ ಹೇಳಿದ್ರೆ ಆಯ್ತು ಅಂತ ಮನಸ್ಸಿನಲ್ಲಿಯೇ ಅಂದುಕೊಂಡಳು.

‘ನಾನು ಸ್ವಾತಿ` ಅಂದಳು.

ಇವನು ತಲೆಕೆರೆದುಕೊಂಡ ‘ಯಾವ ಸ್ವಾತಿ ಮುತ್ತು’

ಅವಳು ಕಿಲಕಿಲನೆ ನಕ್ಕಳು.

ಆಮೇಲೆ ಶ್ರಾವ್ಯ ಕೇಳಿದಳು.`ನೀವು ರಮೇಶ್‌ ಅಲ್ವ’

ಯಾವ ರಮೇಶ್‌.

ಅದಕ್ಕೆ ಅವಳು `ರಮೇಶಣ್ಣ ?ಅಂದಳು.

ಅಲ್ಲ ನಾನು ಶಶಾಂಕ್‌.

ಓಹ್‌ ರಾಂಗ್‌ ನಂಬರ್‌. ಸಾರಿ.

ಅದಕ್ಕೆ ಇವನು ತುಂಟಧ್ವನಿಯಲ್ಲಿ ಥ್ಯಾಂಕ್ಸ್‌ ಅಂದ.

ಯಾಕೆ ಥ್ಯಾಂಕ್ಸ್‌ ? ಅವಳದ್ದು ಮರುಪ್ರಶ್ನೆ.

ಇವನು ಸುಮ್ಮಗೆ ಅಂತ ಹೇಳಿ ನಕ್ಕ.

ಯಾಕೆ ಥ್ಯಾಂಕ್ಸ್‌ ಹೇಳಿದ್ದು ಹೇಳಿ? ಅವಳು ಕಾಡುವ ಧ್ವನಿಯಲ್ಲಿ ಕೇಳಿದಳು.

`ಬೆಳಗ್ಗೆ ನಿಮ್ಮ ಮುದ್ದಾದ ಧ್ವನಿಯ ಸುಪ್ರಭಾತದಿಂದ ನನ್ನ ಎಬ್ಬಿಸಿದಕ್ಕೆ` ಅಂದ.

`ಇಷ್ಟು ಹೊತ್ತಿನವರೆಗೆ ಮಲಗುತ್ತೀರಾ?’ ಆಶ್ಚರ್ಯದಿಂದ ಕೇಳಿದಳು.

‘ಹುಂ. ನನ್ನ ಟೈಮಿಂಗ್ಸ್‌ ಹಾಗೇ’ಅವಳು

`ಲೂಸ್‌’ ಅಂತ ಹೇಳಿ ಫೋನ್‌ ಇಟ್ಟಳು.

***ಫೋನ್‌ ಇಟ್ಟಮೇಲೆ ಶ್ರಾವ್ಯಳಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ನಿನ್ನೆ ಎಂಗೇಜ್‌ಮೆಂಟ್‌ ಕಳೆದರೂ ಅವನಲ್ಲಿ ಮನಬಿಚ್ಚಿ ಮಾತನಾಡಿರಲಿಲ್ಲ. ಈಗ ಫೋನ್‌ನಲ್ಲಿ ಆತನ ತುಂಟ ಧ್ವನಿ ಕೇಳಿ ಇವಳು ಖುಷಿ ಪಟ್ಟದ್ದು ನಿಜ. ಹೀಗೆ ಏನೋ ಯೋಚಿಸುತ್ತ ಕುಳಿತಾಗ ರಂಜಿತ ಬಂದಳು.

`ಏನಾಯ್ತೆ?’ ಅಂತ ಅವಳು ಕೇಳಿದ್ದಕ್ಕೆ ಇವಳು ನಗುತ್ತ ಫೋನ್‌ನಲ್ಲಿ ಮಾತನಾಡಿದ್ದನ್ನು ಹೇಳಿದಳು.

ರಂಜಿತ ನಗಲಿಲ್ಲ. ಗಂಭೀರವಾದ ಧ್ವನಿಯಲ್ಲಿ `ಏ ನಿನ್ನ ಭಾವಿಪತಿ ಬಗ್ಗೆ ನಾನು ಹೀಗೆ ಹೇಳಿದ್ದಕ್ಕೆ ಬೇಜಾರು ಮಾಡ್ಕೊಬೇಡ. ನನಗೆನಿಸುತ್ತೆ. ಅವನ್ಯಾರೋ ದೊಡ್ಡ ಫ್ಲರ್ಟ್‌ ಅಂತ’

ನಗುತ್ತಿದ್ದಶ್ರಾವ್ಯ ಒಮ್ಮೆಗೆ ಗಂಭೀರವಾದಳು. `ಹೇ ಹಾಗೇ ಏನು ಮಾತನಾಡಲಿಲ್ಲ ಕಣೇ ಅವರು’ ಅಂತ ಅವನ ಪರವಾಗಿ ಮಾತನಾಡಿದಳು.

ಯಾಕೋ ಅವನನ್ನು ಫ್ಲರ್ಟ್‌ ಅಂತ ಒಪ್ಪಿಕೊಳ್ಳೋಕೆ ಅವಳಿಗೆ ಮನಸ್ಸು ಬರಲಿಲ್ಲ.

ಸರಿ ನಾನು ಹೇಳಿದ ಹಾಗೇ ಕೇಳ್ತಿಯಾ? ರಂಜಿತಳದ್ದು ಮರುಪ್ರಶ್ನೆ

ಹುಂ ಹೇಳು.`ನೀನು ಅವನನ್ನು ಟೆಸ್ಟ್‌ ಮಾಡು’ ಅದಕ್ಕೆ ಶ್ರಾವ್ಯ

`ಟೆಸ್ಟಾ’ ಅಂತ ಅಚ್ಚರಿಯಿಂದ ಕೇಳಿದಳು.

‘ಹೌದು. ನೀನು ಸುಮ್ಮನೆ ಅವರಿಗೆ ಮೆಸೆಜ್‌ ಮಾಡು. ಹಾಯ್‌ ಅಂತ’

ಶ್ರಾವ್ಯಗೆ ಇದ್ಯಾಕೋ ಇಂಟ್ರೆಸ್ಟಿಂಗ್‌ ಅನಿಸ್ತು. ಮೆಸೆಜ್‌ನಲ್ಲಿ ಹಾಯ್‌ ಅಂತ ಕಳಿಸಿದಳು.

ಸ್ವಲ್ಪ ಹೊತ್ತು ಕಳೆದಾಗ ಶಶಾಂಕ್‌ನಿಂದಾಲೂ `ಹಾಯ್‌’ ಅಂತ ಬಂತು.`ಕಾಲ್‌ ಮಿ’ ಅಂತ ಕಳಿಸು ಅಂತ ರಂಜಿತಾ ಹೇಳಿದಾಗ ಹಾಗೇ ಬರೆದು ಕಳಿಸಿದಳು. ಆಮೇಲೆ ರಂಜಿತ ಶ್ರಾವ್ಯಗೆ ಪಾಠ ಸುರು ಮಾಡಿದಳು. `ನೋಡು ಅವನೀಗ ಲವ್‌ನಲ್ಲಿ ಬೀಳೋ ತರಹ ನೀನು ಮಾತನಾಡಬೇಕು. ನಿಮ್ಮ ಧ್ವನಿ ನಂಗೆ ಇಷ್ಟ, ಹೀಗೆ ಏನಾದ್ರು ಹೇಳು. ನಿಂಗೆ ಹೇಳಿಕೊಡುವ ಅಗತ್ಯವಿಲ್ಲ ಅಲ್ವ…..

***

ಆಫೀಸ್‌ಗೆ ಹೋಗೋಕೆ ಇನ್ನೂ ಸಮಯವಿದ್ದರಿಂದ ಶಶಾಂಕ ಟಿವಿ ನೋಡುತ್ತ ಕುಳಿತಿದ್ದ..

ಆಗ ಆಫೀಸ್‌ನಿಂದ ಪ್ರಾಜೆಕ್ಟ್‌ನಲ್ಲಿ ಏನೋ ತಪ್ಪಾಗಿರೋ ಕುರಿತು ಬಾಸ್‌ ಫೋನ್‌ ಮಾಡಿ ಕಿರಿಕಿರಿ ಮಾಡಿದ್ರು. ಆತನ ತಲೆಕೆಟ್ಟು ಹೋಗಿತ್ತು ಆಗ ಬಂತು ಸ್ವಾತಿಯ `ಕಾಲ್‌ಮಿ ‘ಮೆಸೆಜ್‌.

ಅವಳಿಗೆ ಕಾಲ್‌ ಮಾಡಿ `ಹೇಳಿ ಮೇಡಂ’ ಅಂತ ಗಂಭೀರವಾಗಿ ಹೇಳಿದ.

`ಸುಮ್ಮಗೆ ಕಾಲ್‌ ಮಾಡಿದ್ದು’ ಅಂತ ಅವಳ ಪೆಚ್ಚು ಮಾತಿಗೆ .

`ಏನ್ರಿ ಮಾಡೋಕೆ ಏನು ಕೆಲಸವಿಲ್ವ? ಏನಂದುಕೊಂಡಿದ್ದಿರಾ?’

ಇವನ ಬಯ್ಗುಳ ಕೇಳಿದ ಶ್ರಾವ್ಯಗೆ ರಂಜಿತ ಮಾಡಿದ ಪಾಠವೆಲ್ಲ ಮರೆತೋಯ್ತು.

`ಅದು ಅದು’ ಅಂತ ಪೇಚಾಡಿದಳು.

ಅಲ್ಲ ಅಪರಿಚಿತ ಹುಡುಗರಿಗೆ ಕಾಲ್‌ ಮಾಡ್ತಿರಲ್ವ. ಇಷ್ಟು ಧೈರ್ಯ ಹುಡುಗಿರಿಗೆ ಇರಬಾರದು’ಶಶಾಂಕನ ಇಂತಹ ಬೈಯ್ಗುಳ ಕೇಳಿ ಶ್ರಾವ್ಯಗೆ ಅಳು ಬರೋದಷ್ಟೇ ಬಾಕಿ.

`ಹಾಗಲ್ಲ ಸರ್‌ ಅದು.. ‘ಅಂತ ಮತ್ತೆ ತಡವರಿಸಿದಳು.

ಈಗ ಶಶಾಂಕ್‌ ಕೂಲಾಗಿ ಹೇಳಿದ. `ನೋಡಮ್ಮ ನೀನ್ಯಾರು ಅಂತ ನಂಗೊತ್ತಿಲ್ಲ. ನಿಂಗೂ ನಾನ್ಯಾರು ಅಂತ ಗೊತ್ತಿಲ್ಲ. ಹೀಗೆಲ್ಲ ಮಾಡಬಾರದು’

`ಸಾರ್‌  ನಾನು ಸುಮ್ಮನೆ ಮಾಡಿದ್ದು. ಯಾಕೋ ಬೋರಾಗಿತ್ತು. ಅದಕ್ಕೆ’ ಅಂತ ಹೇಳಿ ಅವನು ಏನು ಹೇಳ್ತಾನೆ ಅಂತ ಕೇಳದೇ ಫೋನ್‌ ಕಟ್‌ ಮಾಡಿದಳು.

***

ಫೋನ್‌ ಕಟ್ಟಾದಾಗ ಶಶಾಂಕ ಯೋಚಿಸಿದ.

ನಾನು ಹೇಳಿದ್ದು ಹೆಚ್ಚಾಯಿತಾ. ಪಾಪ ಹುಡುಗಿ ಭಯಪಟ್ಟಳಾ ಹೇಗೆ? ಅಂತ ಒಂದು ಮನಸ್ಸು ಹೇಳಿದರೆ, ಇಲ್ಲ ಇದನ್ನು ಮುಂದುವರೆಸಬಾರದು. ಅಂತ ಇನ್ನೊಂದು ಮನಸ್ಸು ಹೇಳಿತು.ಆಗ ಮತ್ತೆ ಶ್ರಾವ್ಯಳ `ಸಾರಿ’ ಎಂಬ ಮೆಸೆಜ್‌ ಬಂತು.`ಪರವಾಗಿಲ್ಲ. ಏನೋ ಟೆನ್ಷನ್‌ನಲ್ಲಿದ್ದೆ.. ಬೇಜಾರು ಮಾಡ್ಕೊಬೇಡಿ’ ಅಂತ ಮಾರುತ್ತರ ಕಳಿಸಿದ.

`ಬೆಳ್ಳಗೆ ಅಷ್ಟು ಚೆನ್ನಾಗಿ ಮಾತನಾಡಿದಿರಿ’ ಇವಳು ಮಾರುತ್ತರ ಕಳಿಸಿದಳು. ಹೀಗೆ ಇವರ ಚಾಟಿಂಗ್‌ ಮುಂದುವರೆಯಿತು. ಹೀಗೆ ಶಶಾಂಕನ ಸ್ನೇಹ ಗಳಿಸಿಕೊಳ್ಳುವಲ್ಲಿ ಶ್ರಾವ್ಯ ಯಶಸ್ವಿಯಾದಳು.

ಆದರೆ ಅವನನ್ನು ಪ್ರೀತಿಯ ಬಲೆಗೆ ಬೀಳಿಸಲು ಅವಳಿಂದ ಸಾಧ್ಯವಾಗಲಿಲ್ಲ. ಅದೊಂದು ದಿನ `ನಿಮಗೆ ನನ್ನ ಮೇಲೆ ಯಾವ ಅಭಿಪ್ರಾಯ ಇದೆ’ ಅಂತ ಅಳುಕುತ್ತ ಕೇಳಿದಳು.

`ಅಂದ್ರೆ’

‘ಏನಿಲ್ಲ ಸುಮ್ಮಗೆ ಕೇಳಿದೆ’

‘ನೋಡು ಸ್ವಾತಿ ತಪ್ಪು ತಿಳಿದುಕೊಳ್ಳಬೇಡ. nange ಎಂಗೇಜ್‌ಮೆಂಟ್‌ ಆಗಿದೆ. ಮುಂದಿನ ತಿಂಗಳು ಮದುವೆ’ ಅಂತ ಶಶಾಂಕ ಹೇಳಿದಾಗ ಇವಳಿಗೂ ಕಿಟಲೆ ಮಾಡಬೇಕೆನಿಸಿತು.

`ಮುಂದಿನ ತಿಂಗಳು ಮದುವೆನಾ?’ ಇವಳು ಆಶ್ಚರ್ಯ ವ್ಯಕ್ತಪಡಿಸುತ್ತ ಕೇಳಿದಳು.

`ಹುಂ. ನಿನ್ನನ್ನೂ ಕರೀತಿನಿ’ ಇವನ ಮಾತಿಗೆ ಅವಳು ನಗುತ್ತ ಕೇಳಿದಳು.

`ಹೇಗಿದ್ದಾಳೆ ಸರ್‌ ನಿಮ್‌ ಹುಡುಗಿ’ `ಸೂಪರ್‌’ ಅಂತ ಹೇಳಿ ಶಶಾಂಕ ನಕ್ಕಾಗ ಶ್ರಾವ್ಯಳ ಎದೆಯಲ್ಲಿ ಅವ್ಯಕ್ತ ಭಾವವೊಂದು ಹಾದು ಹೊಯಿತು.

`ಲವ್‌ ಮಾಡಿ ಮದುವೆಯಾಗ್ತ ಇದ್ದಿರಾ?’ ಇವಳ ಅಧಿಕಪ್ರಸಂಗದ ಪ್ರಶ್ನೆಗೆ ಅವನು ಕೋಪಗೊಳ್ಳದೇ ಹೇಳಿದ.

`ಹುಂ ಒಂದು ರೀತಿಯಲ್ಲಿ ಲವ್‌ ಮ್ಯಾರೇಜೇ, ನಾನು ಅವಳನ್ನು ಕಳೆದ ವರ್ಷನೇ ಇಷ್ಟಪಟ್ಟಿದ್ದೆ. ಇವತ್ತಿಗೂ ಹೇಳಿಲ್ಲ’ ಮಾರ್ಮಿಕವಾಗಿ ಹೇಳಿದಾಗ ಶ್ರಾವ್ಯಗೆ ಅಚ್ಚರಿ.

`ಏನು ನೀವು ಅವಳನ್ನು ಲವ್‌ ಮಾಡಿದ್ರ. ಇನ್ನೂ ಹೇಳಿಲ್ವ. ಹಾಗಾದ್ರೆ ಎಂಗೇಜ್‌ಮೆಂಟ್‌?’

`ಹೌದು ನಾನು ಅವಳನ್ನು ಪ್ರೀತಿಸತೊಡಗಿ ಒಂದು ವರ್ಷ ಆಯ್ತು. ಆದ್ರೆ ಹೇಳೋಕೆ ಧೈರ್ಯ ಇರಲಿಲ್ಲ. ಕೊನೆಗೆ ಉಪಾಯ ಮಾಡಿ ಮನೆಯಲ್ಲಿ ಇನ್‌ಡೈರೆಕ್ಟ್‌ ಆಗಿ ತಿಳಿಸಿದೆ. ಮನೆಯವರು ಸಂಪ್ರದಾಯ ಪ್ರಕಾರ ಹೋಗಿ ಹೆಣ್ಣು ಕೇಳಿದ್ರು. ನಾನು ಡೀಸಂಟ್‌ ಆಗಿ ಹೆಣ್ಣು ನೋಡೋ ಕಾರ್ಯ ಮುಗಿಸಿದೆ. ಅವಳಿಗೆ ನನ್ನ ಲವ್‌ ಸ್ಟೋರಿ ಇನ್ನೂ ಗೊತ್ತಿಲ್ಲ. ಹ್ಹ..ಹ್ಹ’ ಅಂತ ಇವನು ಹೇಳಿದಾಗ ಶ್ರಾವ್ಯಳ ಮುಖಕ್ಕೆ ರಕ್ತ ನುಗ್ಗಿತ್ತು.

ಆದರೂ ಸುಮ್ಮಗೆ ನಗುತ್ತ `ವೆರಿ ಇಂಟ್ರೆಸ್ಟಿಂಗ್‌” ಅಂತ ನಕ್ಕಳು.

`ಹುಂ. ಸುಮ್ಮಗೆ ನಿಮ್ಮ ತಲೆ ತಿಂದೆ. ಮದುವೆಗೆ ಕಾಲ್‌ ಮಾಡ್ತಿನಿ. ಖಂಡಿತಾ ಬನ್ನಿ. ಬಾಯ್‌’

ಶ್ರಾವ್ಯ ಬಾಯ್‌ ಹೇಳಿ ಫೋನ್‌ ಕಟ್‌ ಮಾಡಿದಳು

.ಆಮೇಲೆ `ರಂಜಿತಾ ಇದಕ್ಕಿಂತ ಒಳ್ಳೆ ಆಫರ್‌ ಇರೋ ಬೇರೆ ಸಿಮ್‌ ತಗೋ’ ಅಂದಳು. ಅದರಲ್ಲಿರುವ ಎಲ್ಲ ಕಾಂಟ್ಯಾಕ್ಟ್‌ಗಳನ್ನು ನಿನ್ನ ಫೋನ್‌ಗೆ ಹಾಕಿಕೊ’ ಅಂತ ಹೇಳಿದಳು.`ಸರಿ ಹಾಕ್ತಿನಿ. ಯಾಕೆ ಅಂತ ಹೇಳು ಅಂದಾಗ `ಹೇ ಅವರು ನಂಗೆ ಇಷ್ಟವಾಗಿದ್ದಾರೆ ಕಣೇ. ನಾವು ಫೋನ್‌ ಮಾಡಿದ್ದು ಅಂತ ಅವರಿಗೆ ಗೊತ್ತಾಗೋದು ಬೇಡ’ ಅಂತ ತುಸು ನಾಚಿಕೆಯಿಂದ ಹೇಳಿದಳು.

‘ಹೇ ಗುಡ್‌, ಅವರಲ್ಲಿ ಇಷ್ಟ ಇಲ್ಲ ಅಂತ ಹೇಳೋಕೆ ಹೋಗಿ ಬೌಲ್ಡ್‌ ಆದೆಯಾ ಹ್ಹ ಹ್ಹ’ ರಂಜಿತ ಜೋರಾಗಿ ನಗತೊಡಗಿದಳು.

ಶ್ರಾವ್ಯಳ ಮುಖ ಕೆಂಪಗಾಗತೊಡಗಿತು.

-ಪ್ರವೀಣ ಚಂದ್ರ ಪುತ್ತೂರು

8 comments on “ಅವನು ನಂಗೆ ಇಷ್ಟವಿಲ್ಲ ಕಣೇ…!!!

  1. venkatakrishna.k.k. ಹೇಳುತ್ತಾರೆ:

    ತುಂಬಾ ಚೆನ್ನಾಗಿದೆ.
    ಓದಿಸಿಕೊಂಡು ಹೋಗುತ್ತೆ.
    ಸಂಭಾಷಣೆನೂ ಸುಂದರವಾಗಿದೆ.

    ಈ ಕಥೆಯನ್ನು ನಿಲ್ಲಿಸಬೇಡಿ..ಮುಂದುವರೆಸಿ…ಕಂತುಗಳಲ್ಲಿ..

    ಓದುವುದಕ್ಕೆ ನಾನಂತೂ ಕಾಯ್ತೇನೆ..

  2. kiran ಹೇಳುತ್ತಾರೆ:

    super super.intresting i like it

  3. prashu ಹೇಳುತ್ತಾರೆ:

    chikkadaada chokka kathe

  4. rammya ಹೇಳುತ್ತಾರೆ:

    super agide. chennagi odisikondu hoguttee. intaha kategalannu bareyeri. odalu chennagirute

ನಿಮ್ಮ ಟಿಪ್ಪಣಿ ಬರೆಯಿರಿ